ಕಳಸ:ಕಳಸದಲ್ಲಿ ದೀರ್ಘಕಾಲದಿಂದ ಎಲೆಮರೆ ಕಾಯಿಯಂತೆ ಜನಸೇವೆ ಮಾಡುತ್ತಿದ್ದ ವೈದ್ಯ ಡಾ.ಹೇಮಚಂದ್ರ ಪ್ರಸಾದ್(64) ಬುಧವಾರ ಇಹಲೋಕ ತ್ಯಜಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಅವರಿಗೆ ಹೃದಯಾಘಾತ ಆಗಿತ್ತು. ಅವರನ್ನು ರಾತ್ರಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ತೀವ್ರ ಸ್ವರೂಪದ ಹೃದಯಾಘಾತದಿಂದ ಅವರು ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಕೆ.ಎಂ.ರಸ್ತೆಯ ಕ್ಲಿನಿಕ್ನಲ್ಲಿ ವೈದ್ಯ ಸೇವೆ ನಡೆಸುತ್ತಿದ್ದ ಅವರು ‘ಗೌಡ್ರು ಡಾಕ್ಟ್ರು’ ಎಂದೇ ಹೆಸರಾಗಿದ್ದರು. ಬಡ ರೋಗಿಗಳ ಪಾಲಿಗೆ ಅವರು ಅಚ್ಚುಮೆಚ್ಚಿನ ವೈದ್ಯ ಆಗಿದ್ದರು. 10-20 ರೂಪಾಯಿಗೆ ಕೂಡ ಚಿಕಿತ್ಸೆ ನೀಡುತ್ತಿದ್ದ ಅವರು ಕೆಲವೊಮ್ಮೆ ರೋಗಿಗಳ ಬಳಿ ಹಣ ಇಲ್ಲದಿದ್ದರೆ ತಾವೇ ರೋಗಿಗೆ ಹಣ ನೀಡಿ ಕಳಿಸುತ್ತಿದ್ದರು.

ಸಜ್ಜನ ವೈದ್ಯರ ನಿಧನಕ್ಕೆ ಇಡೀ ತಾಲ್ಲೂಕಿನ ಜನರು ಕಣ್ಣಿರು ಹಾಕಿದರು.ಕಳಸ ಪ್ಲಾಂಟರ್ಸ್ ಕ್ಲಬ್ ಆವರಣದಲ್ಲಿ ಅವರ ಫಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಿಕ್ಕಿರಿದು ನೆರೆದಿದ್ದ ಜನರು ನೆಚ್ಚಿನ ವೈದ್ಯರ ದರ್ಶನ ಪಡೆದರು.
