ರವಿ ಕೆಳಂಗಡಿ
ಕಳಸ:ತಾಲ್ಲೂಕಿನಲ್ಲಿ ಎಲೆಮರೆ ಕಾಯಿಯಂತೆ ಜನಸೇವೆ ಮಾಡುವ ಮಹಾನುಭಾವರ ಪೈಕಿ ಒಬ್ಬರಾಗಿದ್ದ ವೈದ್ಯ ಡಾ.ಹೇಮಚಂದ್ರ ಪ್ರಸಾದ್ ನಿಧನರಾಗಿದ್ದಾರೆ.ಇದರಿಂದ ಕಳಸದ ವೈದ್ಯಕೀಯ ಸೇವೆಯ ದೊಡ್ಡ ಕೊಂಡಿ ಕಳಚಿದೆ, ಆ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಅವರು ಇಹಲೋಕ ತ್ಯಜಿಸಿದರೂ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
‘ಬಡವರ ಡಾಕ್ಟರ್’ ಎಂದೇ ಹೆಸರಾಗಿದ್ದ ಹೇಮಚಂದ ್ರ ಪ್ರಸಾದ್ ಅವರ ಕೌಟುಂಬಿಕ ಹಿನ್ನೆಲೆ ಗಮನಿಸಿದರೆ ಅವರು ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರೇ ಆಗಿದ್ದರು.
ಚಿಕ್ಕಮಗಳೂರು ಸಮೀಪದ ಪ್ರತಿಷ್ಟಿತ ಭಾಗಮನೆ ಕುಟುಂಬದ ಅವರು ಕಳಸಕ್ಕೆ ಬಂದು ಬಡ ಜನರ ಸೇವೆ ಮಾಡುವ ಅಗತ್ಯವೇನೂ ಇರಲಿಲ್ಲ.ಐಷಾರಾಮಿ ಜೀವನ ನಡೆಸುವ ಎಲ್ಲ ವ್ಯವಸ್ಥೆಯೂ ಅವರಿಗೆ ಇತ್ತು.ಆದರೆ ಅತ್ತಿಕೊಂಡದ ಕಾಫಿ ತೋಟಕ್ಕಿಂತ ಅವರಿಗೆ ಕಳಸ ಕೆ.ಎಂ ರಸ್ತೆಯ ಕ್ಲಿನಿಕ್ ನೆಚ್ಚಿನ ಕಾರ್ಯಕ್ಷೇತ್ರ ಆಗಿದ್ದು ಮಾತ್ರ ಅಚ್ಚರಿಯೇ ಸರಿ.
‘ಕಳಸೇಶ್ವರನೇ ಅವರಿಂದ ಇಷ್ಟು ವರ್ಷ ಇಂತಹ ಒಳ್ಳೆ ಕೆಲಸ ಮಾಡಿಸಿದ’ ಎಂದು ಅವರ ಸಾವಿನ ದಿನ ಬಡವರೊಬ್ಬರು ಹೇಳಿದ್ದು ಅಕ್ಷರಶಃ ಸತ್ಯವೇ ಆಗಿತ್ತು.ಅವರು ಬಡವರಿಗಾಗಿ ವೈದ್ಯಕೀಯ ಸೇವೆ ಆರಂಭಿಸಿದ್ದು 4 ದಶಕದ ಹಿಂದೆ. ಆಗ ಕಳಸದಲ್ಲಿ ದಿಗ್ಗಜ ವೈದ್ಯರು ಇದ್ದರೂ ಕೆ. ಎಂ. ರಸ್ತೆಯ ಪುಟ್ಟ ಕೋಣೆಯಲ್ಲಿ ಕ್ಲಿನಿಕ್ ಆರಂಭಿಸಿದ್ದರು.
ಆದರೆ ತಮ್ಮ ಸಜ್ಜನಿಕೆ, ಮೃದುಭಾಷೆ, ಬಡವರ ಪರವಾದ ನೈಜ ಕರುಣೆ, ಮಾನವೀಯ ಅಂತಃಕರಣದ ಕಾರಣಕ್ಕೆ ಹೇಮಚಂದ್ರ ಪ್ರಸಾದ್ ಜನರ ಪಾಲಿಗೆ ಅಲ್ಪ ಕಾಲದಲ್ಲೇ ನೆಚ್ಚಿನ ‘ಗೌಡ್ರು ಡಾಕ್ಟರ್’ ಆಗಿದ್ದರು.ಕಳಸ ತಾಲ್ಲೂಕಿನ ಕಾರ್ಮಿಕ ವರ್ಗದ ದೊಡ್ಡ ಪ್ರಮಾಣಕ್ಕೆ ಇವರೇ ನೆಚ್ಚಿನ ಆರೋಗ್ಯ ರಕ್ಷಕ ಆಗಿದ್ದರು.

ವಿಶೇಷ ಎಂದರೆ ಕನಿಷ್ಟ ಶುಲ್ಕ ಪಡೆದು ಬಡವರಿಗೆ ಚಿಕಿತ್ಸೆ ನೀಡುತ್ತಿದ್ದ ಅವರು ಎಂದಿಗೂ ಲೋಭಿ ಆಗಿರಲಿಲ್ಲ. ಸಿರಿವಂತ ಕಾಫಿ ಬೆಳೆಗಾರ ಕುಟುಂಬದಿಂದ ಬಂದರೂ ಯಾವುದೇ ಬಿಗುಮಾನ, ಅಹಂ ಇಲ್ಲದೆ ರೋಗಿಗಳ ಜೊತೆಗೆ ಅವರು ಮಾದರಿಯಾದ ಒಡನಾಟ ಇರಿಸಿಕೊಳ್ಳುತ್ತಿದ್ದರು. ರೋಗಿಗಳ ಜೀವದ ಬೆಲೆ ಅರಿತಿದ್ದ ಅವರು ಗಂಭೀರ ಪ್ರಕರಣದಲ್ಲಿ ಮೊದಲ ಹಂತದಲ್ಲೇ ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳಿಸುತ್ತಿದ್ದರು.
ಇವರ ಕ್ಲಿನಿಕ್ ಬಳಿ ಸದಾ ಬಡ ರೋಗಿಗಳು ಜಮಾಯಿಸುತ್ತಿದ್ದರು.ರೋಗಿಯ ಬಳಿ ಹಣ ಇಲ್ಲದಿದ್ದರೂ ಉಚಿತ ಚಿಕಿತ್ಸೆ ಕೊಡುತ್ತಿದ್ದ ಹೇಮಚಂದ್ರ ಪ್ರಸಾದ್ ಕೆಲವೊಮ್ಮೆ ಬಡ ರೋಗಿಗಳಿಗೆ ಅಷ್ಟಿಷ್ಟು ಹಣ ಕೊಟ್ಟು ಕಳಿಸುತ್ತಿದ್ದ ಹೃದಯವಂತರೂ ಆಗಿದ್ದರು.
40 ವರ್ಷವೂ ಸಮಯಕ್ಕೆ ಸರಿಯಾಗಿ ತಮ್ಮ ಮಾರುತಿ 800 ಕಾರಿನಲ್ಲೇ ಪ್ರತಿದಿನ ಕಳಸಕ್ಕೆ ಬಂದು ರೋಗಿಗಳ ಸೇವೆಗೆ ಅವರು ಸಜ್ಜಾಗಿ ಇರುತ್ತಿದ್ದರು. ಅವರ ಶಿಸ್ತು, ಸರಳತೆ, ಮಾನವೀಯ ಅಂರ್ತಕರಣವು ನಮಗೆಲ್ಲ ಮಾದರಿ.

ಪ್ಲಾಂಟರ್ಸ್ ಕ್ಲಬ್ ಆವರಣದಲ್ಲಿ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಸಾವಿರಾರು ಜನರ ಬಾಯಲ್ಲಿ ಒಂದೇ ಉದ್ಘಾರ. ‘ಎಂಥಹ ಒಳ್ಳೆಯ ಡಾಕ್ಟರನ್ನು ನಾವು ಕಳೆದುಕೊಂಡೆವು’. 40 ವರ್ಷದಿಂದ ಸಾವಿರಾರು ಜನರಿಗೆ ಆರೋಗ್ಯ ಸೇವೆ ಕೊಟ್ಟಿದ್ದ ಹೇಮಚಂದ್ರ ಪ್ರಸಾದ್ ಕಳಸದ ಇತಿಹಾಸದಲ್ಲಿ ಅಮರರಾಗಿದ್ದಾರೆ.
ಇಂತಹ ಶ್ರೀಮಂತ ನಡತೆಯ ವೈದ್ಯರ ಅಕಾಲಿಕ ಸಾವಿನಿಂದ ಇಡೀ ಕಳಸಕ್ಕೆ ದಿಗ್ಭ್ರಮೆ ಆಗಿದೆ.ಇಂತಹವರ ಸಂತತಿ ಇನ್ನಷ್ಟು ಹೆಚ್ಚಲಿ.
