ಕಳಸ:ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಭಗರ್ ಹುಕುಂ ಭೂಮಿಯ ಸಕ್ರಮೀಕರಣ ಸಮಿತಿ ಸದಸ್ಯರಾಗಿ ವಿಶ್ವನಾಥ್ ಮರಸಣಿಗೆ ಆಯ್ಕೆ ಆಗಿದ್ದಾರೆ.
ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಆಗಿರುವ ವಿಶ್ವನಾಥ್ ಮರಸಣಿಗೆ ಪಂಚಾಯಿತಿ ಮಾಜಿ ಅಧ್ಯಕ್ಷರೂ ಹೌದು.ಕಳಸ ತಾಲ್ಲೂಕಿನಲ್ಲಿ ಅವರು ಎಲ್ಲ ಪಕ್ಷಗಳ ಮುಖಂಡರ ಜೊತೆಗೆ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ.ಆದ್ದರಿಂದ ಅವರ ಆಯ್ಕೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಶಾಸಕಿ ನಯನಾ ಮೋಟಮ್ಮ ಈ ಸಮಿತಿಗೆ ಅಧ್ಯಕ್ಷರಾಗಿದ್ದು ಮರ್ಲೆ ಗ್ರಾಮದ ಪ್ರೇಮ ಹಾಗೂ ಫಲ್ಗುಣಿಯ ಹರೀಶ್ ಇತರೆ ಸದಸ್ಯರಾಗಿದ್ದಾರೆ. ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ನೂರಾರು ಸಣ್ಣ ಕೃಷಿಕರು ಫಾರಂ ನಂಬರ್ 53ರಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾದಿದ್ದಾರೆ.ಆದರೆ ಅವರ ಅರ್ಜಿಗಳು ಈವರೆಗೂ ವಿಲೇವಾರಿ ಆಗಿಲ್ಲ.ಅಂಥಹವರ ಅರ್ಜಿಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಈ ಬಾರಿ ಎಲ್ಲ ಬಡ ಮತ್ತು ಅರ್ಹ ಕೃಷಿಕರ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಗಣಿಸಿ ಭೂ ಮಂಜೂರಾತಿಗೆ ಅಗತ್ಯ ಕ್ರಮವನ್ನು ನಮ್ಮ ಸಮಿತಿ ಶಿಫಾರಸ್ಸು ಮಾಡುತ್ತದೆ ಎಂದೂ ವಿಶ್ವನಾಥ್ ತಿಳಿಸಿದ್ದಾರೆ.
ನನ್ನ ಮೇಲೆ ವಿಶ್ವಾಸ ಇಟ್ಟು ಸರ್ಕಾರ ದೊಡ್ಡ ಜವಾಬ್ದಾರಿ ನೀಡಿದೆ. ಈ ಹುದ್ದೆಯನ್ನು ಪಕ್ಷಾತೀತವಾಗಿ ನಿರ್ವಹಿಸಿ ಎಲ್ಲರಿಗೂ ನ್ಯಾಯ ದೊರಕಿಸಲು ಪ್ರಯತ್ನ ಮಾಡುವುದಾಗಿಯೂ ವಿಶ್ವನಾಥ್ ತಿಳಿಸಿದ್ದಾರೆ.
