ಕಳಸ:ಕಾಡುಕೋಣದ ದಾಳಿಯಿಂದ ಗಂಭೀರ ಗಾಯಗೊಂಡಿರುವ ಮುಜೆಕಾನಿನ ಮರಿಗೌಡ ಅವರ ಚಿಕಿತ್ಸೆಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ದಾನಿಗಳಿಂದ ನೆರವು ಸಿಕ್ಕಿದೆ.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮರಿಗೌಡ ಅವರ ಶಸ್ತçಚಿಕಿತ್ಸೆ ಆಗಿದೆ. ಮುಂದಿನ ೨ ವಾರಗಳ ಚಿಕಿತ್ಸೆಗೆ ಸುಮಾರು ೩ ಲಕ್ಷ ರೂಪಾಯಿ ಬೇಕಾಗುತ್ತದೆ.ಆದರೆ ಗಾಯಾಳುವಿನ ಬಳಿ ಹಣ ಇಲ್ಲದೆ ಕುಟುಂಬವು ಕಂಗಾಲಾಗಿದೆ ಎಂದು “voice of kalasa ” ಸೋಮವಾರ ವರದಿ ಪ್ರಕಟಿಸಿತ್ತು.
ಅರಣ್ಯ ಇಲಾಖೆಯು ಮರಿಗೌಡ ಅವರ ಚಿಕಿತ್ಸೆ ಪೂರ್ಣಗೊಂಡ ನಂತರ ಆಸ್ಪತ್ರೆಯ ಬಿಲ್ ಪಡೆದುಕೊಂಡು ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿತ್ತು. ಆದರೆ ಶಾಸಕಿ ನಯನಾ ಮೋಟಮ್ಮ ನಮ್ಮ ವರದಿ ಗಮನಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಜೊತೆ ಕೂಡಲೇ ಮಾತುಕತೆ ನಡೆಸಿದ್ದಾರೆ. ಗಾಯಾಳು ಆಸ್ಪತ್ರೆ ವೆಚ್ಚವನ್ನು ಭರಿಸಲು ಅಸಾಧ್ಯವಾಗಿರುವುದರಿಂದ ಅರಣ್ಯ ಇಲಾಖೆಯೇ ಭರಿಸಬೇಕು ಎಂದು ನಯನಾ ಮೋಟಮ್ಮ ಆಗ್ರಹ ಮಾಡಿದ್ದರು.
ಇದರ ಫಲವಾಗಿ ಅರಣ್ಯ ಇಲಾಖೆ ಸೋಮವಾರ ಆಸ್ಪತ್ರೆಯಿಂದ ಗಾಯಾಳುವಿನ ಚಿಕಿತ್ಸೆಯ ವಿವರ ಪಡೆದುಕೊಂಡಿದೆ.ಮರಿಗೌಡ ಅವರ ಚಿಕಿತ್ಸೆಗೆಂದು ೧ ಲಕ್ಷ ರುಪಾಯಿ ಚೆಕ್ ಸಿದ್ಧವಾಗಿದೆ ಎಂದು ವಲಯ ಅರಣ್ಯಾಧಿಕಾರಿ ನಿಶ್ಚಿತ್ಗೌಡ ತಿಳಿಸಿದ್ದಾರೆ.
ಕಳಸ ಗ್ರಾಮ ಪಂಚಾಯಿತಿ ಸದಸ್ಯ ಸುಂದರ ಶೆಟ್ಟಿ ಪ್ರಯತ್ನದಿಂದ ಮರಿಗೌಡ ಪತ್ನಿಗೆ ಪಂಚಾಯಿತಿ ೯೫೦೦ ರೂಪಾಯಿ ಚೆಕ್ ನೀಡಿದೆ.ಕಳಸದ ಹೃದಯವಂತ ದಾನಿಗಳು ಮರಿಗೌಡರ ಚಿಕಿತ್ಸೆಗೆ ಸುಮಾರು ೩೦ ಸಾವಿರ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾರೆ.ಹೊರನಾಡಿನ ಜಿ.ಭೀಮೇಶ್ವರ ಜೋಷಿ ಕೂಡ ಗಾಯಾಳುವಿನ ಚಿಕಿತ್ಸೆಗೆ ಧನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
