ಕಳಸ: ಕಾಡುಕೋಣದ ದಾಳಿಯಿಂದ ಶನಿವಾರ ತೀವ್ರವಾಗಿ ಗಾಯಗೊಂಡ ಕೃಷಿಕ ಮರಿಗೌಡ ಅವರಿಗೆ ಶಸ್ತçಚಿಕಿತ್ಸೆ ಮುಗಿದಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆದರೆ ಅವರ ಚಿಕಿತ್ಸೆಗೆ ಹಣ ಹೊಂದಿಸಲಾರದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ.
೬೦ ವರ್ಷ ವಯಸ್ಸಿನ ಗೌಡಲು ಸಮುದಾಯದ ವೃದ್ಧ ಮರಿಗೌಡ ಶನಿವಾರ ಕಳಸಕ್ಕೆ ಬರುತ್ತಿದ್ದಾಗ ಅವರ ಎದೆಗೆ ಕಾಡುಕೋಣ ತಿವಿದಿತ್ತು. ಕೋಣದ ದಾಳಿಯಿಂದ ಅವರ ಶ್ವಾಸಕೋಶದಲ್ಲಿ ಮೂರು ಕಡೆ ರಂಧ್ರಗಳಾಗಿದ್ದವು.ಎದೆಯ ಮೂಳೆಗಳು ಮುರಿದಿದ್ದವು. ಸಮಾಧಾನ ಎಂದರೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿಯೇ ಯಶಸ್ವಿ ಶಸ್ತçಚಿಕಿತ್ಸೆ ಮುಗಿದಿದೆ.
ಇನ್ನೂ ೨ ವಾರ ಆಸ್ಪತ್ರೆಯಲ್ಲೇ ಅವರು ಚಿಕಿತ್ಸೆ ಪಡೆಯಬೇಕಿದೆ. ಚಿಕಿತ್ಸೆ ಮುಗಿಯುವ ವೇಳೆಗೆ ಒಟ್ಟು ೩ ಲಕ್ಷ ರೂಪಾಯಿ ಖರ್ಚು ತಗುಲಬಹುದು ಎಂದು ಕುಟುಂಬಸ್ಥರು ಅಂದಾಜಿಸಿದ್ದಾರೆ. ಪರಿಶಿಷ್ಟ ವರ್ಗದ ಗೌಡಲು ಸಮುದಾಯಕ್ಕೆ ಸೇರಿದ ಮರಿಗೌಡ ಅತಿ ಸಣ್ಣ ಕೃಷಿಕರಾಗಿದ್ದಾರೆ. ಸ್ವಲ್ಪ ಗದ್ದೆ ಮತ್ತು ಅರಣ್ಯ ಹಕ್ಕು ಕಾಯ್ದೆಯ ತೋಟದಲ್ಲಿ ಕೃಷಿ ಮಾಡುತ್ತಿದ್ದ ಮರಿಗೌಡ ಅವರಿಗೆ ಪತ್ನಿ ಇದ್ದಾರೆ.ಆದರೆ ಈ ದಂಪತಿಗೆ ಮಕ್ಕಳು ಇಲ್ಲದೆ ಅಕ್ಕ ಪಕ್ಕದ ಮನೆಯವರೇ ಆಸ್ಪತ್ರೆಯಲ್ಲಿ ಶುಶ್ರೂಷೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಕಾಡುಕೋಣದ ದಾಳಿಯಿಂದ ಸಾವಿನ ಅಂಚಿಗೆ ಹೋಗಿದ್ದ ಮರಿಗೌಡ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆದರೆ ಅವರ ಶಸ್ತçಚಿಕಿತ್ಸೆ ಮತ್ತು ಔಷಧದ ವೆಚ್ಚ ಪಾವತಿಸಿ ಅವರನ್ನು ಮನೆಗೆ ಕರೆದೊಯ್ಯುವುದು ಹೇಗೆ ಎಂದು ಕುಟುಂಬಸ್ಥರು ಚಿಂತಿತರಾಗಿದ್ದಾರೆ.
ಮರಿಗೌಡ ಅವರ ಪತ್ನಿ ಕೆಲಸಕ್ಕೆ ಹೋಗುತ್ತಿದ್ದ ಎರಡು ತೋಟದ ಮಾಲೀಕರು ಒಟ್ಟು ೭೫ ಸಾವಿರ ರೂಪಾಯಿ ಸಾಲ ಕೊಟ್ಟಿದ್ದಾರೆ.ಆದರೆ ಉಳಿದ ಹಣ ಎಲ್ಲಿಂದ ತರುವುದು ಎಂಬ ಚಿಂತೆ ಶುರು ಆಗಿದೆ ಎಂದು ಮುಜೇಕಾನಿನ ಅನಿಲ್ ಹೇಳುತ್ತಾರೆ.
ಮರಿಗೌಡ ಅವರ ಚಿಕಿತ್ಸೆಯ ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆಯೇ ಎಂದು ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ಅವರನ್ನು ಸಂಪರ್ಕಿಸಿದಾಗ ಅವರು, ಆಸ್ಪತ್ರೆಯ ಚಿಕಿತ್ಸೆಗೆ ಹಣ ಒದಗಿಸಲು ಅವಕಾಶ ಇಲ್ಲ. ರೋಗಿ ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ಅವರು ಚಿಕಿತ್ಸೆಗೆ ವೆಚ್ಚ ಮಾಡಿದ ಮೊತ್ತದ ಬಿಲ್ಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು.ಆದಷ್ಟು ಬೇಗ ಮೊತ್ತ ಬಿಡುಗಡೆ ಆಗಲು ನಮ್ಮ ಇಲಾಖೆ ಸಹಕಾರ ಕೊಡುತ್ತದೆ ಎಂದರು.
