ರವಿ ಕೆಳಂಗಡಿ
ಕಳಸ:ಮಲೆನಾಡಿನಲ್ಲಿ ಈ ವರ್ಷದ ಬೇಸಿಗೆ ತಾಪ ಮತ್ತು ಹೆಚ್ಚಿದ ಮಳೆಯಿಂದಾಗಿ ಕಾಳುಮೆಣಸಿನ ಇಳುವರಿ ಶೇ.30ಕ್ಕೂ ಹೆಚ್ಚು ಕುಸಿತ ಆಗುವ ನಿರೀಕ್ಷೆ ಇದೆ.ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಮೆಣಸಿನ ಧಾರಣೆ ಕುಸಿಯುತ್ತಲೇ ಇರುವುದು ಬೆಳೆಗಾರರಲ್ಲಿ ತಲ್ಲಣ ತರುತ್ತಿದೆ.
ನಾಲ್ಕು ತಿಂಗಳ ಹಿಂದೆ ಕೆಜಿಗೆ 700 ರೂಪಾಯಿ ಧಾರಣೆ ಪಡೆದು ಬೆಳೆಗಾರರಲ್ಲಿ ಆಶಾಕಿರಣ ಮೂಡಿಸಿದ್ದ ಕಾಳುಮೆಣಸು ಈಗ 610 ರೂಪಾಯಿ ಮಟ್ಟಕ್ಕೆ ಕುಸಿದಿದೆ.ಇದಕ್ಕೆ ಕಾರಣ ಅಂಕುಶ ಇಲ್ಲದಂತೆ ಬೇರೆ ದೇಶಗಳಿಂದ ಭಾರತಕ್ಕೆ ಆಗುತ್ತಿರುವ ಮೆಣಸಿನ ಆಮದು.
ಭಾರತಕ್ಕೆ ಶ್ರೀಲಂಕಾ, ವಿಯೆಟ್ನಾಂ, ಬ್ರೆಜಿಲ್ ಜೊತೆಗೆ ಈಕ್ವೆಡಾರ್, ಮಡಗಾಸ್ಕರ್ ದೇಶದಿಂದಲೂ ಮೆಣಸು ಆಮದು ಆಗುತ್ತಿದೆ.ಕಳೆದ 4 ತಿಂಗಳಲ್ಲಿ ದೇಶಕ್ಕೆ ಒಟ್ಟು 12 ಸಾವಿರ ಟನ್ ಮೆಣಸು ಆಮದು ಆಗಿದೆ.ಈ ಪೈಕಿ ಶ್ರೀಲಂಕಾದಿಂದಲೇ 10 ಸಾವಿರ ಟನ್ಗೂ ಹೆಚ್ಚು ಮೆಣಸು ಬಂದಿದೆ.ಮುಕ್ತ ವ್ಯಾಪಾರ ಮಾರುಕಟ್ಟೆ ಒಪ್ಪಂದ ಪ್ರಕಾರ ಶ್ರೀಲಂಕಾದಿಂದ ಭಾರತಕ್ಕೆ 2,500 ಟನ್ ಮೆಣಸು ಯಾವುದೇ ತೆರಿಗೆ ಇಲ್ಲದೆ ತರಬಹುದಾಗಿದೆ.ಆನಂತರದ ಮೆಣಸಿಗೆ ಶೇ.8 ತೆರಿಗೆ ಪಾವತಿಸಬೇಕಾಗುತ್ತದೆ.
ಶ್ರೀಲಂಕಾದಲ್ಲಿ ಈ ಬಾರಿ 25 ಸಾವಿರ ಟನ್ ಹೆಚ್ಚುವರಿ ಮೆಣಸು ಇದ್ದು ಅದು ಭಾರತಕ್ಕೆ ಆಮದು ಮಾಡಲು ಉತ್ಸುಕವಾಗಿದೆ ಎಂದು ಮಾರುಕಟ್ಟೆ ಅಧ್ಯಯನ ವರದಿಗಳು ತಿಳಿಸುತ್ತವೆ.
ಆಮದುದಾರರು ಶ್ರೀಲಂಕಾದಿಂದ ಭಾರತಕ್ಕೆ ತರುತ್ತಿರುವ ಕಾಳುಮೆಣಸು ಹಗುರವಾಗಿದ್ದು ಹೆಚ್ಚಿನ ತೇವಾಂಶ ಹೊಂದಿದೆ ಎಂಬ ದೂರು ಇದೆ.
ಇದರಿಂದ ಕಳಪೆ ಗುಣಮಟ್ಟದ ಮೆಣಸು ಭಾರತಕ್ಕೆ ಬರುತ್ತಿದೆ.ಭಾರತದ ಮಾರುಕಟ್ಟೆಯಲ್ಲಿ ಇದೇ ಮೆಣಸಿನ ವ್ಯಾಪಾರ ಜೋರಾಗಿದೆ. ಪರಿಣಾಮವಾಗಿ ಭಾರತದಲಿ ಉತ್ಪಾದನೆ ಆಗುವ ಗುಣಮಟ್ಟದ ಮೆಣಸಿನ ಬೆಲೆ ಕುಸಿತ ಆಗುತ್ತಿದೆ.
ಭಾರತದಲ್ಲಿ ಈ ವರ್ಷ ಉತ್ಪಾದನೆ ಕಡಿಮೆ ಎಂಬ ಕಾರಣಕ್ಕೆ ಹೆಚ್ಚಿನ ಬೆಲೆ ನಿರೀಕ್ಷೆ ಮಾಡಿದ್ದೆವು.ಆದರೆ ಈಗ ಬೆಲೆ ಕುಸಿತ ಆಗುತ್ತಿರುವುದು ಬೇಸರ ತಂದಿದೆ ಎಂದು ಗೌತಹಳ್ಳಿಯ ಯುವ ಬೆಳೆಗಾರ ಕರಣ್ ಹೇಳುತ್ತಾರೆ.
ಭಾರತಕ್ಕೆ ಆಮದಾಗುವ ಈ ಕಳಪೆ ಮೆಣಸನ್ನು ಭಾರತದ ಮೆಣಸಿನ ಜೊತೆಗೆ ಮಿಶ್ರಣ ಮಾಡಿ ಭಾರತದ ಮಾರುಕಟ್ಟೆಗೆ ಬಿಡುವ ಜೊತೆಗೆ ವಿದೇಶಕ್ಕೂ ಮರು ರಫ್ತು ಮಾಡುವ ಯತ್ನವೂ ನಡೆಯುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಭಾರತದ ಮೆಣಸಿಗೆ ಕೆಟ್ಟ ಹೆಸರು, ಕಡಿಮೆ ಧಾರಣೆ ನಿಗದಿ ಆಗುವ ಅಪಾಯವೂ ಇದೆ ಎಂಬ ಅಭಿಪ್ರಾಯ ಬಲವಾಗಿದೆ.
ಕಳೆದ ಬಾರಿ ಮೆಣಸಿನ ಧಾರಣೆ ಕೆಜಿಗೆ 700 ರೂಪಾಯಿಗೆ ಏರಿದಾಗ ಬಹಳಷ್ಟು ಮೆಣಸು ಸಂಗ್ರಹಿಸಿದ್ದ ವ್ಯಾಪಾರಿಗಳು ಕೂಡ ಇದೀಗ ನಷ್ಟಕ್ಕೆ ಒಳಗಾಗಿದ್ದು ಈಗಿನ ಬೆಲೆಯಲ್ಲಿ ಮೆಣಸು ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಶ್ರೀಲಂಕಾ ಮೆಣಸಿನ ಆಮದು ತಡೆದು ಸ್ಥಳೀಯ ಕಾಳುಮೆಣಸಿಗೆ ಉತ್ತಮ ಧಾರಣೆ ಖಚಿತಪಡಿಸಬೇಕಾದುದು ಸರ್ಕಾರದ ಕರ್ತವ್ಯ ಎಂದು ಮೆಣಸು ಬೆಳೆಗಾರ ಲಿಂಬೆಕೊಂಡ ಚಂದ್ರಶೇಖರ್ ಆಗ್ರಹಿಸುತ್ತಾರೆ.
