ರವಿ ಕೆಳಂಗಡಿ
ಕಳಸ:ಕಳಸ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ 90 ನಿವೇಶನರಹಿತರು ಕಾತರದಿಂದ ಕಾದಿದ್ದರು. ಆಯುಧ ಪೂಜೆಯ ದಿನ ಕಳಸ ಪಂಚಾಯಿತಿಯ 75 ಫಲಾನುಭವಿಗಳಿಗೆ ಮತ್ತು ಚನ್ನಡಲಿನ 15 ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ಹಂಚುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
2019ರಲ್ಲಿ ಭಾರಿ ಮಳೆಗೆ ಮನೆ ಕಳೆದುಕೊಂಡು 5 ವರ್ಷ ಕಳೆದರೂ ಹಕ್ಕುಪತ್ರ ಸಿಗದೆ ರೋಸಿ ಹೋಗಿದ್ದ ಚನ್ನಡಲಿನ ಜನರು ಆಡಳಿತ ವ್ಯವಸ್ಥೆ ಬಗ್ಗೆ ನಂಬಿಕೆಯನ್ನೇ ಕಳೆದುಕೊಂಡಿದ್ದರು. ಅವರ ಮುಖದಲ್ಲಿ ಮಂದಹಾಸ ಮೂಡಿಸುವ ಶಾಸಕಿ ನಯನಾ ಮೋಟಮ್ಮ ಅವರ ಒಂದೂವರೆ ವರ್ಷದ ಸತತ ಪ್ರಯತ್ನ ಕೊನೆಗೂ ಫಲ ಕೊಟ್ಟಿತು.
ಶಾಸಕರ ಕೈಯಿಂದ ಹಕ್ಕುಪತ್ರ ಪಡೆದ ಚನ್ನಡಲು ಸಂತ್ರಸ್ತರ ಪೈಕಿ ಹೆಚ್ಚಿನವರ ಮುಖದಲ್ಲಿ ಖುಷಿ ಕಂಡರೆ, ಕೆಲವರ ಕಣ್ಣಿನ ತುದಿಯಲ್ಲಿ ಕಣ್ಣೀರು ಕೂಡ ಹನಿಯಿತು. ಶಾಸಕಿ ಪ್ರತಿಯೊಬ್ಬ ಫಲಾನುಭವಿಗೆ ಕೂಡ ನಮಸ್ಕಾರ ಮಾಡಿ ಹಕ್ಕುಪತ್ರ ವಿತರಿಸಿ ವಿನಯ ತೋರಿದರು.

ಕಳಸ ಗ್ರಾಮ ಪಂಚಾಯಿತಿಯಲ್ಲಿ 500ಕ್ಕೂ ಹೆಚ್ಚು ವಸತಿರಹಿತರು ಇದ್ದು ಇಂದು 75 ಜನರಿಗೆ ಶಾಸಕಿ ಹಕ್ಕುಪತ್ರ ವಿತರಿಸಿದರು. ಈ ಫಲಾನುಭವಿಗಳನ್ನು ಪಂಚಾಯಿತಿ 4 ವರ್ಷದ ಹಿಂದೆಯೇ ಲಾಟರಿ ಮೂಲಕ ಆಯ್ಕೆ ಮಾಡಿತ್ತು. ಕಲ್ಮಕ್ಕಿ ಸಮೀಪದ ಈ ಹೊಸ ಬಡಾವಣೆಯ ಅಭಿವೃದ್ಧಿಗೆ ತನ್ನ ನಿಧಿಯಿಂದ ಅನುದಾನ ನೀಡುವುದಾಗಿ ಶಾಸಕಿ ನಯನಾ ಮೋಟಮ್ಮ ಪ್ರಕಟಿಸಿದರು.
ಕುದುರೆಮುಖ ದಿನಗೂಲಿಗಳು, ಮಲೆಮನೆ ಮತ್ತು ಮಧುಗುಂಡಿ ಸಂತ್ರಸ್ತರಿಗೂ ಸದ್ಯದಲ್ಲೇ ಹಕ್ಕುಪತ್ರ ಒದಗಿಸುವ ಬಗ್ಗೆ ಪ್ರಯತ್ನ ನಡೆದಿದೆ ಎಂದೂ ನಯನಾ ತಿಳಿಸಿದರು. ಇಡೀ ಕ್ಷೇತ್ರದಲ್ಲಿ ಸ್ಥಳೀಯ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡುವ ಚಿತಾವಣೆಗಳ ಬಗ್ಗೆಯೂ ಶಾಸಕಿ ಅಸಮಾಧಾನ ಹೊರಹಾಕಿದರು.
ಹಕ್ಕುಪತ್ರ ಪಡೆದ 90 ಜನರು ಕೈಯಲ್ಲಿ ಹಕ್ಕುಪತ್ರ ಹಿಡಿದು ಸ್ವಂತ ಸೂರಿನ ಕನಸು ಕಾಣಲಾರಂಭಿಸಿದರು. ಕಳೆದ 30 ವರ್ಷದಿಂದ ಯಾರಿಗೂ ನಿವೇಶನ ನೀಡದ ದಾಖಲೆ ಆಯುಧ ಪೂಜೆಯ ದಿನ ಮುರಿದು ಹೋಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಹಕ್ಕುಪತ್ರ ವಿತರಣೆಯ ಸಮಾರಂಭಗಳು ನಡೆಯಬಹುದು ಎಂಬ ಆಶಾಭಾವನೆಯೂ ಮೂಡಿತು.
ವಸತಿರಹಿತರೆಂಬ ಹಣೆಪಟ್ಟಿ ಹೊತ್ತು ಕಾರ್ಯಕ್ರಮಕ್ಕೆ ಬಂದಿದ್ದ 90 ಜನರು ಆ ಹಣೆಪಟ್ಟಿ ಕಳೆದುಕೊಂಡರು.ಈ ಆಯುಧ ಪೂಜೆ ಅವರೆಲ್ಲರ ಜೀವನಕ್ಕೆ ಶುಭ ತರಲಿ ಎಂಬುದು ವಾಯ್ಸ್ ಆಫ್ ಕಳಸ ಹಾರೈಕೆ.
